ಗಣಿತದ ಉದ್ದೇಶ

Issue18-March-2024

ಇದೆಲ್ಲದರ ಉದ್ದೇಶವೇನು???’ ತಾವು ಕಲಿಯುತ್ತಿರುವ ಪರಿಕಲ್ಪನೆ ಮತ್ತು ಕ್ರಮವಿಧಿಗಳ ‘ಉಪಯುಕ್ತತೆ’ಯ ಬಗ್ಗೆ ವಿದ್ಯಾರ್ಥಿಗಳು ಮತ್ತೆ ಮತ್ತೆ ಈ ಪ್ರಶ್ನೆಯನ್ನು ಕೇಳುತ್ತಿರುತ್ತಾರೆ. ಹಾಗಾಗಿ ಇದು ಹೆಚ್ಚಿನ ಗಣಿತ ಶಿಕ್ಷಕರನ್ನು ಎಡಬಿಡದೆ ಕಾಡುತ್ತಿರುವ ಪ್ರಶ್ನೆ ಎಂದರೆ ತಪ್ಪಾಗುವುದಿಲ್ಲ. ನಮ್ಮೆಲ್ಲರ ಬದುಕಿನಲ್ಲಿ ಗಣಿತವು ಹಾಸುಹೊಕ್ಕಾಗಿ ಸೇರಿಹೋಗಿರುವಾಗ ಈ ಪ್ರಶ್ನೆಗೆ ಉತ್ತರ ಒಂದು ರೀತಿಯಲ್ಲಿ ಸುಲಭ; ಒಂದು ರೀತಿಯಲ್ಲಿ ಕಠಿಣ. ಸುಲಭವೇಕೆಂದರೆ ಎಲ್ಲಿ ನೋಡಿದರೂ ಅಲ್ಲಿ ಗಣಿತ ಕಾಣುತ್ತದೆ. ಆದರೆ ಅದನ್ನು ನಿರ್ದಿಷ್ಟವಾಗಿ ಮತ್ತು ಸಂಕ್ಷಿಪ್ತವಾಗಿ ವಿವರಿಸುವುದು ಕಷ್ಟ. ಇಲ್ಲಿರುವ ಚಿತ್ರವನ್ನೇ ಗಮನಿಸಿ. ಈ ಕ್ರೀಡೆಯಲ್ಲಿ ಆಕೃತಿಗಳು, ಕೋನಗಳು, ಸಂಖ್ಯೆಗಳು, ಅಳತೆ, ದತ್ತಾಂಶ, ವಿನ್ಯಾಸಗಳು, ಇತಿಹಾಸ ಮತ್ತು ಸಂಸ್ಕೃತಿ ಇವೆಲ್ಲವೂ ಬೆರೆತುಹೋಗಿವೆ. ಆದರೆ, ಇಂಥ ಸಾಧನೆಯ ಪ್ರಯತ್ನದಲ್ಲಿ ನಾವು ತೊಡಗಿಕೊಂಡಿರುವಾಗ ಗಣಿತ ನಮ್ಮ ಅರಿವಿನ ಪರಿಧಿಯೊಳಗೆ ಬರುತ್ತದೆಯೇ?

ಸಂಪಾದಕರ ನುಡಿ

ಅಟ್‌ ರೈಟ್‌ ಆಂಗಲ್ಸ್‌, ಅಭ್ಯಾಸ ನಿರತ ಶಿಕ್ಷಕರು ಮತ್ತು ಶಿಕ್ಷಕ ಶಿಕ್ಷಕರಿಗೆ ಉತ್ತಮ ಗುಣಮಟ್ಟದ ಕಲಿಕಾ ಸಂಪನ್ಮೂಲಗಳನ್ನು ಒದಗಿಸುವ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಪ್ರಯತ್ನದ ಭಾಗವಾಗಿದೆ. ಶಾಲಾ ಶಿಕ್ಷಕರು, ಅಭ್ಯಾಸಿಗಳು ಮತ್ತು ಶಿಕ್ಷಣ ತಜ್ಞರ ನಡುವೆ ಶಿಕ್ಷಣ, ಬೋಧನಾ ವಿಧಾನ ಮತ್ತು ತಳಸ್ತರದ ಅನುಭವಗಳ ಕುರಿತಾದ ಪ್ರಸಕ್ತ ದೃಷ್ಟಿಕೋನಗಳ ಮೇಲೆ ಚರ್ಚೆಯನ್ನು ಪ್ರೋತ್ಸಾಹಿಸುವುದು ನಮ್ಮ ಗುರಿ. ಶಿಕ್ಷಕ ಸಾಮರ್ಥ್ಯ ಅಭಿವೃದ್ಧಿಯಲ್ಲಿ ನೆರವಾಗುವುದು ಮತ್ತು ಹೆಚ್ಚು ಅನುಭವಾತ್ಮಕ ಮತ್ತು ಅರ್ಥಗರ್ಭಿತ ಬೋಧನಾ-ಕಲಿಕಾ ಪ್ರಕ್ರಿಯೆಗಳನ್ನು ಪರಿಚಯಿಸುವುದು ನಮ್ಮ ಇಚ್ಛೆ. ಒಂದು ನಿರ್ದಿಷ್ಟ ಗುರಿಯನ್ನು ಹೊಂದಿರುವ ಮತ್ತು ಉತ್ಸಾಹಭರಿತ ಬೋಧನೆಯನ್ನು ಸಂಭ್ರಮಿಸುವ ಸಲುವಾಗಿ, ಅಟ್‌ ರೈಟ್‌ ಆಂಗಲ್ಸ್‌ ಪತ್ರಿಕೆಯು ಭಾರತ ಮತ್ತು ಅದರ ವಿವಿಧ ಸಮುದಾಯಗಳಿಂದ ಹೊರಹೊಮ್ಮುವ ಪ್ರಾಯೋಗಿಕ ಒಳನೋಟಗಳ ಮೇಲೆ ಬೆಳಕು ಚೆಲ್ಲುತ್ತದೆ.

‘ಆಟ್ ರೈಟ್ ಅಂಗಲ್ಸ್’ ಪತ್ರಿಕೆಯು ಮಾರ್ಚ್ 2024ರ ಸಂಚಿಕೆಯಿಂದ ಮಹತ್ತರ ಬದಲಾವಣೆಗಳನ್ನು ಕಾಣಲಿದೆ. ಈ ಹಿಂದೆ, ಅಂದರೆ ನವೆಂಬರ್ 2023 ಸಂಚಿಕೆಯ ಸಂಪಾದಕೀಯದಲ್ಲಿ ಇದರ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದೆವು. ಹಾಗಾಗಿ ಈ ವಿಶೇಷ ಸಂದರ್ಭದಲ್ಲಿ ಈ ಹಿಂದಿನ ಸಂಚಿಕೆಗಳ ಪ್ರಧಾನ ಸಂಪಾದಕರಾದ ಶೈಲೇಶ್ ಶಿರಾಲಿಯವರಿಗೆ ಅವರ ಕ್ರಿಯಾಶೀಲ ನಾಯಕತ್ವ ಹಾಗೂ ಮಾರ್ಗದರ್ಶನಕ್ಕಾಗಿ ಧನ್ಯವಾದಗಳನ್ನು ಹೇಳುವುದು ನಮ್ಮ ಕರ್ತವ್ಯ. ಇದರೊಟ್ಟಿಗೆ ನಾವು ಪತ್ರಿಕೆಯನ್ನು ಈ ಹಂತಕ್ಕೆ ತರಲು ಅಪಾರವಾಗಿ ಶ್ರಮಿಸಿದ ಆಗಾಧ ಕೊಡುಗೆಗಳನ್ನು ನೀಡಿದ ಸಂಪಾದಕೀಯ ಮಂಡಲಿಯ ಸದಸ್ಯರಾದ ಕೆ. ಸುಬ್ರಮಣ್ಯಂ, ಪೃಥ್ವಿಜಿತ್ ಡೇ, ಶಶಿಧರ ಜಗದೀಶನ್, ಎ. ರಾಮಚಂದ್ರನ್ ಮತ್ತು ಜೋನಕಿ ಘೋಷ್ ಇವರೆಲ್ಲರಿಗೂ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇವೆ. ಇನ್ನು ಮುಂದೆಯೂ ನಾವು ಅವರೆಲ್ಲರಿಂದ ಸಲಹೆ, ಮಾರ್ಗದರ್ಶನ ಮತ್ತು ಕೊಡುಗೆಗಳನ್ನು ನಿರೀಕ್ಷಿಸುತ್ತೇವೆ.

ನಮ್ಮ ಮುಖ್ಯ ಓದುಗರೆಂದರೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿನ ಸರಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರು. ಆದ್ದರಿಂದ ಮುಂದಿನ ಎಲ್ಲ ಸಂಚಿಕೆಗಳನ್ನು ಅವರಿಗೆ ಮತ್ತು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಕಲಿಯಲೆಂದು ಶಿಕ್ಷಕರನ್ನು ಸಿದ್ಧಗೊಳಿಸುತ್ತಿರುವ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಂಪನ್ಮೂಲ ವ್ಯಕ್ತಿಗಳಿಗೆ ನೇರವಾಗಿ ಪ್ರಸ್ತುತವಾಗಬೇಕೆಂಬ ಉದ್ದೇಶದಿಂದ ರೂಪಿಸಲಾಗುತ್ತದೆ.ಇದಕ್ಕಾಗಿ ನಾವು ರಾ.ಪ.ಚೌ.2023ರ ಗಣಿತದ ವಿಭಾಗದಿಂದ ಒಂದಷ್ಟು ಒಳನೋಟಗಳನ್ನು ಪಡೆದಿದ್ದೇವೆ.

ಹಾಗಾಗಿ ಈ ಸಂಚಿಕೆಯಲ್ಲಿ ನಮ್ಮ ವಿಶೇಷ ಲೇಖನಗಳು ವಿಭಾಗವು ಸಂದೀಪ್ ದಿವಾಕರ್ ಅವರ ತರಗತಿ 1 ಮತ್ತು 2ರ ಹೊಸ ಗಣಿತ ಪಠ್ಯಪುಸ್ತಕಗಳಲ್ಲಿ ಹೊಸದೇನಿದೆ? ಎನ್ನುವ ಲೇಖನದಿಂದ ಪ್ರಾರಂಭವಾಗುತ್ತದೆ. ಹೃದಯ್‌ ಕಾಂತ್‌ ದಿವಾನ್‌ರವರು ಸಾಂದರ್ಭಿಕ ಸಮಸ್ಯಾ ಪರಿಹಾರದ ಕುರಿತಾದ ತಮ್ಮ ಲೇಖನದಲ್ಲಿ ಶಿಕ್ಷಕರ ಸ್ಥಳೀಯ ವಾಸ್ತವತೆ ಮತ್ತು ಶಾಲಾ ವಾತಾವರಣದೊಳಗೆ ಹೇಗೆ ಶೈಕ್ಷಣಿಕ ಸಂಗತಿಗಳಿಗೆ, ಸಾಮಗ್ರಿಗಳಿಗೆ ಮತ್ತು ಪ್ರಕ್ರಿಯೆಗಳಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಬಹುದೆಂದು ಚರ್ಚಿಸಿದ್ದಾರೆ. ರೀಮಾ ಕೌರ್ ಅವರು ಗಣಿತದ ಬೇರೆ ಬೇರೆ ಉಪವಿಭಾಗಗಳ ನಡುವೆ ಕಂಡೂಕಾಣದಂತಿರುವ ತೆಳುಗೆರೆಗಳ ಕುರಿತಾಗಿ ತಮ್ಮ ಯಾರು ಗಣಿತದ ಶಬ್ದಸಂಪತ್ತನ್ನು ಬೋಧಿಸುತ್ತಾರೆ? ಲೇಖನದಲ್ಲಿ ಅನ್ವೇಷಿಸಿದ್ದಾರೆ.

ಈ ಬಾರಿಯ ತರಗತಿ ವಿಭಾಗದ ಕೇಂದ್ರಬಿಂದು ಗುಣಾಕಾರ ಮತ್ತು ಭಾಗಾಕಾರಗಳ ಪರಿಕಲ್ಪನೆ. ಅರ್ಧೇಂದು ದಾಸ್‌ರವರು ಭಾಗಾಕಾರದ ಕ್ರಮವಿಧಿಯ ಬೋಧನಾ ವಿಧಾನದ ಕುರಿತಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಜಿತೇಂದ್ರ ವರ್ಮರವರು ಸಂಖ್ಯೆ 7ರ ಭಾಜ್ಯತೆಯನ್ನು ಪರೀಕ್ಷಿಸುವ ಮೂರು ವಿಧಾನಗಳನ್ನು ವಿವರವಾಗಿ ಚರ್ಚಿಸಿದ್ದಾರೆ. ಸ್ವಾತಿ ಸರ್ಕಾರ್ ಅವರ ಲೇಖನ ಎರಡು ಸಂಖ್ಯೆಗಳ ಗುಣಲಬ್ಧವನ್ನು ಗರಿಷ್ಠಗೊಳಿಸುವ ಒಂದು ಆಟದ ಮತ್ತು ಬಹು ಅಂಕಿ ಭಾಜಕಗಳನ್ನೊಳಗೊಂಡ ಭಾಗಾಕಾರವನ್ನು ಬೋಧಿಸುವುದರಿಂದಾಗುವ ಅನುಕೂಲತೆಗಳ ಕುರಿತಾಗಿದೆ. ಈ ಎಲ್ಲ ಲೇಖನಗಳಲ್ಲಿ ದೃಢೀಕರಣ, ಅಂದಾಜು ಗಣನೆ, ತರ್ಕ ಮತ್ತು ಪ್ರಕ್ರಿಯಾತ್ಮಕ ತಾರ್ಕಿಕ ಕೌಶಲಗಳಿಗೆ ಒತ್ತು ನೀಡಲಾಗಿದೆ.

ತರಗತಿಯ ವಿಭಾಗ ಮುಗಿದಾಗ ಅವಲೋಕನ ವಿಭಾಗ ಪ್ರಾರಂಭವಾಗುತ್ತದೆ.ಅಲ್ಲಿ ದಶಮಾನ ಪದ್ಧತಿಯಲ್ಲಿ ಬಳಸಲಾಗುವ FLU ಪಟ್ಟಿಗಳ ಬಗೆಗಿನ ಪರಿಶೀಲನೆಯಿದೆ.

ನಮ್ಮ ಹೊಸ ವಿಭಾಗವಾದ ಗಣಿತದ ಸಂತಸದಲ್ಲಿ ನಾವು ಮೋಹನ್ ಆರ್ ರವರ ಎರಡು ಲೇಖನಗಳೊಂದಿಗೆ ಗಣಿತದ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದೇವೆ. ಅವೆಂದರೆ ಜಾವೆಲಿನ್ ಎಸೆತ ಹಾಗೂ ಊಹೆಯಂದಾಜು (Guesstimation) ಮತ್ತು ಫರ್ಮಿ ಅಂದಾಜು ಸಮಸ್ಯೆಗಳು. ಗಣಿತವು ಹೇಗೆ ಬಗೆಬಗೆಯಾಗಿ ವೇಷ ಮರೆಸಿಕೊಂಡು ಬರುತ್ತದೆ? ಒಂದು ಸಮಸ್ಯೆಯನ್ನು ಎಷ್ಟು ವಿಧಗಳಲ್ಲಿ ಪರಿಹರಿಸಬಹುದು ಎನ್ನುವುದನ್ನು ತಿಳಿಯಲು ಕೋಳಿಗಳು ಮತ್ತು ಮೊಲಗಳ ಕಥೆಯನ್ನು ಓದಿ!


ಎಂದಿನಂತೆ ಪುಲ್‌ಔಟ್‌ನೊಂದಿಗೆ ನಮ್ಮ ಸಂಚಿಕೆ ಮುಕ್ತಾಯವಾಗುತ್ತದೆ. ಗುಣಾಕಾರದಲ್ಲಿ ಪ್ರಭುತ್ವ ಮಟ್ಟ ಸಾಧಿಸಿರುವುದನ್ನು ಕಂಡುಹಿಡಿಯುವುದು ಹೇಗೆ? ಪದ್ಮಪ್ರಿಯಾ ಶಿರಾಲಿಯವರು ಇದಕ್ಕಾಗಿ ಬಗೆಬಗೆಯ ದಾರಿಗಳನ್ನು ತೋರಿಸಿಕೊಡುತ್ತಿದ್ದಾರೆ. ಅವೆಲ್ಲವೂ ನಿರಂತರ ಪುನರಾವರ್ತಿತ ಅಭ್ಯಾಸವನ್ನು ನೀಡುವುದಲ್ಲದೆ ಉನ್ನತ ಮಟ್ಟದ ಚಿಂತನಾ ಕೌಶಲದ ಕಲಿಕೆಗೆ ಅನುವು ಮಾಡಿಕೊಡುತ್ತವಾದರೂ ಅವು ಕಠಿಣ ಎನಿಸದ, ವಿದ್ಯಾರ್ಥಿಗಳಿಗೆ ಒತ್ತಡ ನೀಡದ ಅಭ್ಯಾಸಗಳು.

ನಾವು ಈ ಹೊಸ ರೂಪದಲ್ಲಿ ನೆಲೆಗೊಂಡ ನಂತರದ ದಿನಗಳಲ್ಲಿ, ಕಂಪ್ಯೂಟೇಶನಲ್ ಚಿಂತನೆ ಕುರಿತು ನಿಮಗೆ ಹೆಚ್ಚಿನ ಲೇಖನಗಳನ್ನು ಒದಗಿಸಲು ಬಯಸುತ್ತೇವೆ. ನಿಮ್ಮ ತರಗತಿಗಳಿಗೆ ಕಾರ್ಯಹಾಳೆಗಳು ಕೆಲವು ಟೇರ್‌ ಔಟ್‌ಗಳು ಮತ್ತು ಸಮಗ್ರ ಸಮಸ್ಯೆಯ ಸಂದೂಕವಂತೂ ಇದ್ದೇ ಇರುತ್ತದೆ. ಸದ್ಯಕ್ಕೆ, ಸಂಚಿಕೆಯಲ್ಲಿ ಅಲ್ಲಲ್ಲಿ ಕಾಣುವ ಸಮಸ್ಯೆಗಳನ್ನು ಆನಂದಿಸಿ ಮತ್ತು ನಿಮ್ಮ ಪರಿಹಾರಗಳನ್ನು AtRightAngles.editor@apu.edu.in ಗೆ ಕಳುಹಿಸಲು ಮರೆಯಬೇಡಿ.

Sneha Titus
Chief Editor, At Right Angles