ಕ್ರಮವಿಧಿ – ಒಂದು ಪರಿಚಯ

ಅನುವಾದ: ಪ್ರವೀಣ್ ಎಸ್. ಕೋಲಾರ | ಪರಿಶೀಲನೆ: ಮಧುಕರ ಎಸ್. ಪುಟ್ಟಿ

ಈ ಲೇಖನವು ಕ್ರಮವಿಧಿಗಳ ಪರಿಕಲ್ಪನೆ ಮತ್ತು ಅವುಗಳ ಮಹತ್ವವನ್ನು ಅನ್ವೇಷಿಸುತ್ತದೆ. ಅಲ್ಲದೇ, ದಿನನಿತ್ಯದ ಬದುಕಿನಲ್ಲಿ ಬಳಸುವ ಕ್ರಮವಿಧಿಗಳು ಮತ್ತು ಗಣಿತೀಯ ನಿದರ್ಶನಗಳ ಮೂಲಕ ಅವುಗಳ ಅನ್ವಯದ ಮೇಲೆ ಬೆಳಕು ಚೆಲ್ಲುತ್ತದೆ.

ಕ್ರಮವಿಧಿ ಎಂದರೇನು?

ನಿಮ್ಮ ಅಚ್ಚುಮೆಚ್ಚಿನ ಒಂದು ವಿಡಿಯೋ ಗೇಮ್ ಹೇಗೆ ಕೆಲಸ ನಿರ್ವಹಿಸುತ್ತದೆ ಎಂದು ಎಂದಾದರೂ ನಿಮಗೆ ಕುತೂಹಲ ಉಂಟಾಗಿದೆಯೇ? ಈ ಸಾಧನಗಳು ಅಥವಾ ಆಪ್‌ಗಳು ಕಂಪ್ಯೂಟರ್ ಅರ್ಥಮಾಡಿಕೊಳ್ಳುವಂತಹ ಒಂದು ವಿಶೇಷ ಭಾಷೆಯಲ್ಲಿ ಬರೆದಿರುವ ಕೋಡ್ ಅನ್ನು ಅರ್ಥಮಾಡಿಕೊಂಡು ಕೆಲಸ ಮಾಡುತ್ತವೆ.. ಈ ಕೋಡ್ ಕಂಪ್ಯೂಟರ್ ಪರಿಷ್ಕರಿಸಬಹುದಾದ ಸೂಚನೆಗಳನ್ನು ನೀಡುತ್ತದೆ. ಈ ಸೂಚನೆಗಳಿಂದಲೇ ನೀವು ಆಪ್ ಬಳಸಲು ಅಥವಾ ಆಟ ಆಡಲು ಸಾಧ್ಯವಾಗುವುದು. ಯಾವುದೇ ಒಂದು ನಿರ್ದಿಷ್ಟ ಕಾರ್ಯವನ್ನು ಮಾಡಲು ನೀಡಲಾಗುವ ಸೂಚನೆಗಳ ಪಟ್ಟಿಗೆ ಕ್ರಮವಿಧಿ ಎನ್ನುತ್ತೇವೆ. ಸೂಚನೆಗಳ ಒಂದು ಪಟ್ಟಿಯನ್ನು ಕ್ರಮವಿಧಿಯೆಂದು ಕರೆಯಬೇಕಾದರೆ, ಅದಕ್ಕೊಂದು ನಿರ್ದಿಷ್ಟವಾದ ಪ್ರಾರಂಭ ಮತ್ತು ಅಂತ್ಯ ಇರಬೇಕು. ಇಲ್ಲದಿದ್ದರೆ ಅದೊಂದು ಕೊನೆಯಿಲ್ಲದ ಕ್ರಮವಿಧಿಯಾಗುತ್ತದೆ.

ಈ ಕ್ರಮವಿಧಿಗಳು ಕೇವಲ ಕಂಪ್ಯೂಟರ್‌ಗಳಿಗಷ್ಟೇ ಸೀಮಿತವಲ್ಲ. ನಾವು ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಯಾವಾಗಲೂ ಬಳಸುತ್ತೇವೆ. ಹೇಗೆಂದು ತಿಳಿಯಲು ಒಂದು ಸರಳ ಉದಾಹರಣೆಯನ್ನು ನೋಡೋಣ: ನೀವು ಒಂದು ರುಚಿಕರವಾದ ಖಾದ್ಯವನ್ನು ತಯಾರು ಮಾಡಬೇಕು ಅಂದುಕೊಳ್ಳಿ – ರೊಟ್ಟಿಯೊಂದಿಗೆ ಬೆಲ್ಲ ಮತ್ತು ತುಪ್ಪ ಇರುವ ಖಾದ್ಯ. ಇದನ್ನು ತಯಾರಿಸಲು ನೀವು ಈ ಕೆಳಗಿನ ಸೂಚನೆಗಳನ್ನು ಪಾಲಿಸುತ್ತೀರಿ, ಅಲ್ಲವೇ?

  1. ಒಂದು ರೊಟ್ಟಿಯನ್ನು ತೆಗೆದುಕೊಳ್ಳಿ.
  2. ರೊಟ್ಟಿಯ ಮೇಲ್ಬಾಗಕ್ಕೆ ಒಂದು ಚಮಚ ತುಪ್ಪವನ್ನು ಸವರಿ.
  3. ಸ್ವಲ್ಪ ಬೆಲ್ಲವನ್ನು ತುರಿದುಕೊಳ್ಳಿ.
  4. ತುರಿದ ಬೆಲ್ಲದ ಪುಡಿಯನ್ನು ರೊಟ್ಟಿಯ ಮೇಲೆ ಹರಡಿ.
  5. ರೊಟ್ಟಿಯನ್ನು ಸುತ್ತಿ.

ನಿಮ್ಮ ರುಚಿಕರವಾದ ಖಾದ್ಯ ಈಗ ಸಿದ್ಧವಾಯಿತು. ಸವಿಯಿರಿ!

ರೊಟ್ಟಿ ಮತ್ತು ತುಪ್ಪ

ಕ್ರಮವಿಧಿಗಳ ಪ್ರಾಮುಖ್ಯತೆ ಏನು?

ಕ್ರಮವಿಧಿಗಳು ಎಲ್ಲೆಲ್ಲಿಯೂ ಇವೆ! ಅವು ಕೇವಲ ಕಂಪ್ಯೂಟರ್‌ಗಳು, ರೋಬೋಗಳಿಗೆ ಮಾತ್ರವಲ್ಲ, ಜನರಿಗೂ ಕೂಡ ಸಮಸ್ಯೆಗಳನ್ನು ದಕ್ಷವಾಗಿ ಪರಿಹರಿಸುವಲ್ಲಿ ಸಹಾಯ ಮಾಡುತ್ತವೆ. ಕ್ರಮವಿಧಿ ಅಂದರೆ, ಪ್ರತಿಬಾರಿ ಪಾಲಿಸಿದಾಗಲೂ, ಒಂದು ಕೆಲಸವು, ಸುಸಂಗತವಾಗಿ ಮತ್ತು ಸರಿಯಾಗಿ ಮಾಡಲ್ಪಡುತ್ತದೆ ಎಂದು ಖಾತರಿಪಡಿಸುವ ನಿಖರವಾದ ಸೂಚನೆಗಳ ಪಟ್ಟಿ. ಅವುಗಳನ್ನು ಒಂದು ಯಂತ್ರವೂ ಕೂಡ ಪಾಲಿಸುವಂತಿರಬೇಕು. ಆದ್ದರಿಂದ, ಅವುಗಳು ಸ್ಪಷ್ಟವಾಗಿರಬೇಕು ಮತ್ತು ಅವುಗಳಿಗೆ ಒಂದೇ ಅರ್ಥ ಇರಬೇಕು!

ಮತ್ತೆ ಮತ್ತೆ ಮಾಡಬೇಕಾದ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲು ಮತ್ತು ಒಂದೇ ರೀತಿಯ ಔಟ್‌ಪುಟ್‌ ಅನ್ನು ಪಡೆಯಲು ಕ್ರಮವಿಧಿಗಳು ವಿಶೇಷವಾಗಿ ಪ್ರಯೋಜನಕಾರಿ. ಕ್ರಮವಿಧಿಗಳು ಪಾಕವಿಧಾನ (recipe) ಇದ್ದ ಹಾಗೆ: ಅಲ್ಲಿ ನೀಡಿರುವ ಸೂಚನೆಗಳು ಸ್ಪಷ್ಟವಾಗಿದ್ದು ನಿಖರವಾಗಿದ್ದರೆ, ಮಾಡಿದ ಖಾದ್ಯವು ಯಾವಾಗಲೂ, ಯಾರೇ ತಯಾರಿಸಿದರೂ, ಒಂದೇ ರುಚಿಯನ್ನು ಹೊಂದಿರುತ್ತದೆ. ಯಂತ್ರಗಳು, ಪದೇ ಪದೇ ಮಾಡಬೇಕಾದ ಕೆಲಸಗಳನ್ನು, ಸ್ಪಷ್ಟವಾದ ಸೂಚನೆಗಳನ್ನು ನೀಡಿದಾಗ ಮಾಡಬಲ್ಲವು. ಸೂಚನೆಗಳು ಸ್ಪಷ್ಟವಿದ್ದಾಗ, ಕೆಲಸವನ್ನು ಪ್ರತಿಯೊಂದು ಬಾರಿ ಮಾಡಿದಾಗಲೂ ಒಂದೇ ಔಟ್‌ಪುಟ್‌ ಬರುತ್ತದೆ. ಕೆಲಸಗಳನ್ನು ಸ್ವಯಂಚಾಲಿತಗೊಳಿಸಲು ಕ್ರಮವಿಧಿಗಳನ್ನು ಬಳಸುವುದರಿಂದ ಬೇಸರಿಕೆ ಅಥವಾ ಆಯಾಸದಿಂದ ಆಗಬಹುದಾದ ತಪ್ಪುಗಳು ಆಗುವುದಿಲ್ಲ. ಇದಕ್ಕೆ ಕಾರಣವೆಂದರೆ, ಪ್ರತಿ ಬಾರಿಯೂ ಯಂತ್ರವು ಸೂಚನೆಗಳನ್ನು ಒಂದೇ ರೀತಿಯಲ್ಲಿ ಕಾರ್ಯರೂಪಕ್ಕೆ ತರುತ್ತವೆ.

ಅಂದರೆ, ರೊಟ್ಟಿ ಬೆಲ್ಲವನ್ನು ಮಾಡಲು ಇರುವ ಈ ಕ್ರಮವಿಧಿಯು ವಾಸ್ತವದಲ್ಲಿ ಕ್ರಮವಿಧಿಯೇ ಅಲ್ಲ. ಏಕೆಂದರೆ, ಇದರಲ್ಲಿ ಇರುವ ಸೂಚನೆಗಳನ್ನು ಜನರು ಹಲವು ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು. ಉದಾಹರಣೆಗೆ, ಮೊದಲ ಸೂಚನೆ, “ಒಂದು ರೊಟ್ಟಿಯನ್ನು ತೆಗೆದುಕೊಳ್ಳಿ”, ಸಾಕಷ್ಟು ವಿವರಗಳನ್ನು ನೀಡುವುದಿಲ್ಲ. ಈ ಸೂಚನೆಯನ್ನು ಉತ್ತಮಗೊಳಿಸುವ ಒಂದು ವಿಧಾನವೆಂದರೆ ರೊಟ್ಟಿಯ ಗಾತ್ರ, ದಪ್ಪ, ಮತ್ತು ರೊಟ್ಟಿಯನ್ನು ಮಾಡಲು ಬೇಕಾಗಿರುವ ಪದಾರ್ಥಗಳನ್ನು ನಮೂದಿಸುವುದು. ಅದನ್ನು ಹೀಗೆ ಬರೆಯಬಹುದು: “ಸುಮಾರು 5 cm ತ್ರಿಜ್ಯ ಮತ್ತು 2 mm ದಪ್ಪವಿರುವ ಒಂದು ಗೋಧಿ ಹಿಟ್ಟಿನ ರೊಟ್ಟಿಯನ್ನು ತೆಗೆದುಕೊಳ್ಳಿ. ಎರಡನೇ ಸೂಚನೆಯನ್ನು ಹೀಗೆ ಮತ್ತೂ ವಿಷದವಾಗಿ ಬರೆಯಬಹುದು: “ಒಂದು ಚಮಚ ಅಮೂಲ್ ತುಪ್ಪವನ್ನು ತೆಗೆದುಕೊಂಡು, ರೊಟ್ಟಿಯ ಒಂದು ಭಾಗದ ಮೇಲೆ ಸಮವಾಗಿ ಹರಡಿ. ಉಳಿದ ಸೂಚನೆಗಳನ್ನು ಮತ್ತೂ ಸ್ಪಷ್ಟ ಮತ್ತು ನಿಖರಗೊಳಿಸಲು ನೀವೇ ಪ್ರಯತ್ನಿಸಿ.

ಕ್ರಮವಿಧಿಗಳು ಇಲ್ಲದಿದ್ದರೆ, ನಮ್ಮ ಪ್ರಪಂಚವು ಮತ್ತೂ ಗೊಂದಲಮಯವಾಗಿರುತ್ತಿತ್ತು ಎಂಬುದನ್ನು ನೀವು ಗಮನಿಸಬಹುದು. ಕ್ರಮವಿಧಿಗಳ ಬಗ್ಗೆ ಕಲಿಯುವುದರಿಂದ, ನೀವು ಗಣಿತ, ವಿಜ್ಞಾನ, ಅಥವಾ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಮತ್ತೂ ದಕ್ಷವಾಗಿ ಬಿಡಿಸಬಹುದೆಂದು ನಿಮಗೆ ಅರ್ಥವಾಗಲು ಪ್ರಾರಂಭವಾಗುತ್ತದೆ.

ಕ್ರಮವಿಧಿಗಳ ಬಗ್ಗೆ ತಿಳಿಯಲು ಪ್ರಾರಂಭಿಸೋಣ

ಪ್ರಶ್ನೆ: ಒಂದೇ ಸಮಸ್ಯೆ ಪರಿಹಾರಕ್ಕೆ ಹಲವು ಕ್ರಮವಿಧಿಗಳು ಇರಬಹುದೆ?

ಹೌದು, ಒಂದು ಸಮಸ್ಯೆ ಪರಿಹಾರಕ್ಕೆ ಹಲವಾರು ಕ್ರಮವಿಧಿಗಳು ಇರಬಹುದು! ಉದಾಹರಣೆಗೆ, ನೀವು ನಿಮ್ಮ ಮನೆಯಿಂದ ಶಾಲೆಗೆ ಹೋಗಬೇಕಿದೆ ಅಂದುಕೊಳ್ಳೋಣ. ಈ ಪ್ರಯಾಣವನ್ನು ನೀವು ಬಸ್ಸಿನ ಮೂಲಕ ಅಥವಾ ಸೈಕಲ್ ಬಳಸಿ ಮಾಡಬಹುದು. ಎರಡು ವಿಧಾನಗಳಲ್ಲೂ ನೀವು ನಿಮ್ಮ ಶಾಲೆಯನ್ನೇ ಸೇರುತ್ತೀರಿ, ಆದರೆ ನೀವು ಅನುಸರಿಸುವ ಹಂತಗಳು ಬೇರೆ ಬೇರೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ನೀವು ಬೇರೆ ಕ್ರಮವಿಧಿಯನ್ನು ಅನುಸರಿಸುತ್ತೀರಿ.

ಪ್ರಶ್ನೆ: ಒಂದು ಸಮಸ್ಯೆಯನ್ನು ಯಾವುದೇ ಕ್ರಮವಿಧಿಯ ಸಹಾಯವಿಲ್ಲದೆ ಪರಿಹರಿಸಬಹುದೇ?

ಒಂದು ಸಮಸ್ಯೆಯನ್ನು ಪರಿಹರಿಸುವಾಗ ಸಾಮಾನ್ಯವಾಗಿ ನಾವು ಅನುಸರಿಸುತ್ತಿರುವ ಹಂತಗಳನ್ನು ದಾಖಲಿಸಿಕೊಳ್ಳುವುದಿಲ್ಲ. ಆದ್ದರಿಂದ, ಸಮಸ್ಯೆಗಳನ್ನು ಕ್ರಮವಿಧಿಯಿಲ್ಲದೇ ಪರಿಹರಿಸಬಹುದು ಎಂದು ನಮಗೆ ಅನ್ನಿಸಬಹುದು. ಒಂದು ಸಮಸ್ಯೆಯನ್ನು ಪರಿಹರಿಸುವಾಗ ಸಾಮಾನ್ಯವಾಗಿ ನಾವು ಅನುಸರಿಸುತ್ತಿರುವ ಹಂತಗಳನ್ನು ನಾವು ದಾಖಲಿಸಿಕೊಳ್ಳುವುದಿಲ್ಲ. ಆದ್ದರಿಂದ, ಸಮಸ್ಯೆಗಳನ್ನು ಕ್ರಮವಿಧಿಯಿಲ್ಲದೇ ಪರಿಹರಿಸಬಹುದು ಎಂದು ನಮಗೆ ಅನ್ನಿಸಬಹುದು. ಒಂದು ಸ್ಪಷ್ಟವಾದ ಕ್ರಮವಿಧಿ ಇಲ್ಲದೆ ಒಂದು ಸಮಸ್ಯೆಯನ್ನು ಪರಿಹರಿಸುತ್ತಿರುವಾಗ, ನಾವು ಕೆಲವು ಹಂತಗಳನ್ನು ಪದೇ ಪದೇ ಅನುಸರಿಸುವಂತೆ ಆಗಬಹುದು. ಅಷ್ಟೇ ಅಲ್ಲ, ನಮ್ಮ ಸಮಸ್ಯೆಯನ್ನು ಪರಿಹರಿಸಲು ಅತ್ಯಂತ ದಕ್ಷ ವಿಧಾನವನ್ನು ನಾವು ಕಂಡುಕೊಳ್ಳದೇ ಇರಬಹುದು ಅಥವಾ ಅಂತಹ ವಿಧಾನವನ್ನು ಕಂಡುಕೊಂಡಲ್ಲಿ, ಅದನ್ನು ಮರೆತುಬಿಡಬಹುದು. ಇದರಿಂದಾಗಿ, ಅದೇ ರೀತಿಯ ಸಮಸ್ಯೆಯನ್ನು ಭವಿಷ್ಯದಲ್ಲಿ ಮತ್ತೆ ಪರಿಹರಿಸುವ ಸಂದರ್ಭ ಬಂದಾಗ, ನಾವು ನಮ್ಮ ಆಲೋಚನೆಯನ್ನು ಸಂಪೂರ್ಣವಾಗಿ ಪುನರಾವರ್ತಿಸಬೇಕಾಗಬಹುದು. ಒಂದು ಸಮಸ್ಯೆಯನ್ನು ಪರಿಹರಿಸುವಾಗ, ನಾವು ಅನುಸರಿಸಬೇಕಾದ ಹಂತಗಳ ಒಂದು ವ್ಯವಸ್ಥಿತವಾದ ಸರಣಿಯನ್ನು ಬಳಸಬೇಕು. ನಾವು ಸಮಸ್ಯೆಯನ್ನು ಓದಿ, ಮಾಹಿತಿಯನ್ನು ವಿಶ್ಲೇಷಿಸಿ, ಸಮಸ್ಯೆಯನ್ನು ಪರಿಹರಿಸಲು ಒಂದು ಯೋಜನೆಯನ್ನು ಸಿದ್ಧಪಡಿಸುತ್ತೇವೆ. ನಂತರ, ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದು ಉತ್ತರವನ್ನು ಪಡೆಯುತ್ತೇವೆ. ಈಗ ಕಥೆಗಳು, ಆಟಗಳು, ಮತ್ತು ಚಟುವಟಿಕೆಗಳ ಮೂಲಕ ಕ್ರಮವಿಧಿಗಳನ್ನು ಅನ್ವೇಷಿಸೋಣ.

ಚಟುವಟಿಕೆ 1: ಕಥಾ ಸಮಯ: ಬಾಯಾರಿದ ಕಾಗೆ

ಉದ್ದೇಶ: ಕಥೆಯಲ್ಲಿನ ಪಾತ್ರಗಳು ಸಮಸ್ಯೆಗಳನ್ನು ಪರಿಹರಿಸಲು ಕ್ರಮವಿಧಿಗಳನ್ನು ಹೇಗೆ ಬಳಸುತ್ತವೆ ಎಂದು ತಿಳಿಸಲು ಕಥೆಗಳನ್ನು ಬಳಸುವುದು

ಕಥೆ: ಒಂದು ಬಿಸಿಲಿನ ಮಧ್ಯಾಹ್ನ ಕಾಲಿಯ ಎಂಬ ಕಾಗೆಗೆ ಬಾಯಾರಿಕೆಯಾಗಿತ್ತು. ಹತ್ತಿರದಲ್ಲೇ ಅರ್ಧ ನೀರು ತುಂಬಿದ ಒಂದು ಮಣ್ಣಿನ ಮಡಿಕೆಯನ್ನು ಅದು ಕಂಡಿತು. ಮಡಿಕೆಯ ಕಂಠದ ಮೇಲೆ ಕೂತು ತನ್ನ ಉದ್ದವಾದ ಕೊಕ್ಕಿನ ಮೂಲಕ ನೀರನ್ನು ಹೀರುವ ಪ್ರಯತ್ನ ಮಾಡಿತಾದರೂ, ನೀರಿನ ಮಟ್ಟ ಕೆಳಗೆ ಇದ್ದಿದ್ದರಿಂದ ಅದಕ್ಕೆ ಕುಡಿಯಲು ಸಾಧ್ಯವಾಗಲಿಲ್ಲ.

algorithms-F2
ಬಾಯಾರಿದ ಕಾಗೆ

ಈಗೇನು ಮಾಡುವುದು ಎಂದು ಯೋಚಿಸುತ್ತಾ ತನ್ನ ಸುತ್ತ ನೋಡಿತು. ಮಡಿಕೆಯ ಸುತ್ತಲಿದ್ದ ಸಣ್ಣಪುಟ್ಟ ಕಲ್ಲುಗಳನ್ನು ತನ್ನ ಕೊಕ್ಕಿನಿಂದ ತಂದು ಮಡಿಕೆಯ ಕಂಠದ ಮೇಲ್ಬಾಗದಲ್ಲಿ ಕುಳಿತು ನಿಧಾನವಾಗಿ ಒಂದೊಂದೇ ಕಲ್ಲನ್ನು ಮಡಿಕೆಯ ಒಳಗೆ ಹಾಕತೊಡಗಿತು. ತಾನು ಬಗ್ಗಿ ನೀರು ಕುಡಿಯುವ ಮಟ್ಟಕ್ಕೆ ನೀರು ಏರುವವರೆಗೂ ಕಲ್ಲನ್ನು ಹಾಕಿ, ಕೊಕ್ಕಿನ ಮಟ್ಟಕ್ಕೆ ನೀರು ಬಂದಾಗ, ತೃಪ್ತಿಯಾಗುವಷ್ಟು ನೀರು ಸಂತೋಷದಿಂದ ಹಾರಿತು.

ನಾವೀಗ ಕಾಲಿಯಾ ತನ್ನ ಸಮಸ್ಯೆಗೆ ಕಂಡುಕೊಂಡ ಪರಿಹಾರವನ್ನು ಒಂದು ಕ್ರಮವಿಧಿಯಾಗಿ ಬರೆಯೋಣ:

ಕಾಲಿಯಾನ ಕ್ರಮವಿಧಿ

  1. ಕಲ್ಲನ್ನು ಹುಡುಕು.
  2. ಕಲ್ಲನ್ನು ಮಡಿಕೆಯ ಒಳಗೆ ಹಾಕು.
  3. ಮಡಿಕೆಯಲ್ಲಿನ ನೀರಿನ ಮಟ್ಟವು ಕೊಕ್ಕಿಗೆ ಸಿಗುತ್ತಿದೆಯೇ ಎಂದು ಪರೀಕ್ಷಿಸು.
  4. ನೀರಿನ ಮಟ್ಟ ಸಾಕಷ್ಟು ಎತ್ತರವಿಲ್ಲದಿದ್ದರೆ ಹಂತ 1, 2, 3 ಗಳನ್ನು ಪುನರಾವರ್ತಿಸು.
  5. ಮಡಿಕೆಯಲ್ಲಿನ ನೀರಿನ ಮಟ್ಟವು ಕೊಕ್ಕಿಗೆ ಸಿಗುವಂತಿದ್ದರೆ ತೃಪ್ತಿಯಾಗುವಷ್ಟು ನೀರು ಕೊಡಿ!

ಚರ್ಚೆ: ಈ ಪಟ್ಟಿಯು ಕಾಲಿಯಾ ತನ್ನ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಕಂಡುಕೊಂಡ ಕ್ರಮವಿಧಿ. ಈ ಪಟ್ಟಿಯಲ್ಲಿರುವ ಪ್ರತಿಯೊಂದು ಹಂತವನ್ನೂ ಅನುಸರಿಸಿ, ಕಾಲಿಯಾ ಜಲರಹಿತ ಸ್ಥಿತಿಯನ್ನು ತಲುಪುವುದನ್ನು ತಪ್ಪಿಸಬಹುದು!

ಪ್ರಶ್ನೆಗಳು

ಒಂದು ವೇಳೆ ಕಾಲಿಯ ತನ್ನ ಈ ಕ್ರಮವಿಧಿಯಲ್ಲಿ ಯಾವುದಾದರೂ ಒಂದು ಹಂತವನ್ನು ಪಾಲಿಸದಿದ್ದರೆ ಏನಾಗುತ್ತದೆ? ಉದಾಹರಣೆಗೆ ಪ್ರತಿಬಾರಿ ಕಲ್ಲುಗಳನ್ನು ನೀರಿನೊಳಗೆ ಹಾಕಿದಾಗಲೂ ಕೊಕ್ಕಿನಿಂದ ನೀರಿನ ಮಟ್ಟವನ್ನು ಪರೀಕ್ಷಿಸದಿದ್ದರೆ ಏನಾಗುತ್ತದೆ? ಒಂದು ಕ್ರಮವಿಧಿಯಲ್ಲಿ ಪ್ರತಿ ಹಂತವನ್ನೂ ಸರಿಯಾದ ಕ್ರಮದಲ್ಲಿ ಪಾಲಿಸುವುದು ಏಕೆ ಮುಖ್ಯ?

ಈ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಕಾಲಿಯ ಬೇರೆ ಯಾವುದಾದರೂ ಕ್ರಮವಿಧಿಯನ್ನು ಅನುಸರಿಸಬಹುದಿತ್ತೇ? ಮಡಿಕೆಯ ಸುತ್ತಮುತ್ತ ಕಲ್ಲುಗಳಿರಲಿಲ್ಲ ಎಂದಿದ್ದರೆ ಏನು ಮಾಡಬಹುದಿತ್ತು? ಉದಾಹರಣೆಗೆ, ಮಣ್ಣಿನ ಮಡಿಕೆಗೆ ತನ್ನ ಕೊಕ್ಕಿನಿಂದ ಒಂದು ತೂತನ್ನು ಮಾಡಿ, ಅದರಿಂದ ನೀರು ಕುಡಿಯಬಹುದಿತ್ತೇ?

ಚಟುವಟಿಕೆ 2: ನೃತ್ಯ ಕ್ರಮವಿಧಿ

ಉದ್ದೇಶ: ನೃತ್ಯದ ಭಂಗಿಗಳು ಮತ್ತು ಹಂತಗಳ ಕ್ರಮಗಳ ಬಗ್ಗೆ ತಿಳಿಯುವುದು

ಕ್ರಮವಿಧಿ F3
ನೃತ್ಯದ ಹಂತಗಳು

ಆಟ: ನಾವು ಒಂದು ಸರಳ ನೃತ್ಯದ ಹಂತಗಳನ್ನು ಬರೆದು, ಅವುಗಳನ್ನು ಒಟ್ಟಿಗೆ ಅನುಸರಿಸುತ್ತೇವೆ. ಯಾವುದಾದರು ಜನಪ್ರಿಯ ನರ್ಸರಿ ಪದ್ಯ ಅಥವಾ ಹಾಡನ್ನು ಸಹ ಇದಕ್ಕೆ ಪರಿಗಣಿಸಬಹುದು. ಉದಾಹರಣೆಗೆ, ‘ಲೋಬಿ ಲೂ’ ಹಾಡಿನ ಸಾಹಿತ್ಯವನ್ನು ಈ ಕೆಳಗಿನ ಕ್ರಮವಿಧಿಯ ರೂಪದಲ್ಲಿ ನಿರೂಪಿಸಬಹುದು.

ನೃತ್ಯದ ಹಂತಗಳು

  1. ನಿಮ್ಮ ಎರಡು ಕೈಗಳನ್ನು ಪೂರ್ಣವಾಗಿ ಅಡ್ಡಲಾಗಿ ಆಚೆಗೆ ಚಾಚಿ ನಿಂತುಕೊಳ್ಳಿ.
  2. ಬಲಗೈಯನ್ನು ಎತ್ತಿ.
  3. ಅದನ್ನು ಮೇಲೆ ಕೆಳಗೆ ಆಡಿಸಿ.
  4. ಒಂದು ಸುತ್ತು ಸುತ್ತಿ.
  5. ಎಡಗೈಯನ್ನು ಎತ್ತಿ.
  6. ಅದನ್ನು ಮೇಲೆ ಕೆಳಗೆ ಆಡಿಸಿ.
  7. ಮತ್ತೆ ಒಂದು ಸುತ್ತು ಸುತ್ತಿ.

ಸೂಚನೆಗಳು

  1. ಈ ಹಂತಗಳನ್ನು ಒಂದು ಬೋರ್ಡ್ ಅಥವಾ ಕಾಗದದ ಮೇಲೆ ಬರೆಯಿರಿ.
  2. ಪ್ರತಿ ಹಂತವನ್ನೂ ಹಾಡು ಅಥವಾ ಲಯಕ್ಕೆ ಅನುಗುಣವಾಗಿ ನಿಧಾನವಾಗಿ ಅಭ್ಯಾಸ ಮಾಡಿ.
  3. ಎಲ್ಲ ಹಂತಗಳನ್ನು ಅನುಕ್ರಮವಾಗಿ ಅನುಸರಿಸಿ ನೃತ್ಯ ಮಾಡಿ.

ಚರ್ಚೆ: ನೃತ್ಯ ಕ್ರಮವಿಧಿಯನ್ನು ಅನುಸರಿಸಿ, ನೀವು ನೃತ್ಯದ ಚಲನಗಳನ್ನು ನೆನಪಿನಲ್ಲಿಟ್ಟುಕೊಂಡು ಅವುಗಳನ್ನು ಸರಿಯಾದ ಕ್ರಮದಲ್ಲಿ ಅನುಸರಿಸಬಹುದು. ನೀವು ಹಂತಗಳ ಕ್ರಮಗಳನ್ನು ಬದಲಾಯಿಸಿದರೆ, ನೃತ್ಯವು ಬೇರೆ ರೀತಿ ಕಾಣುತ್ತದೆ. ಇದರಿಂದ ಕ್ರಮವಿಧಿಯ ಹಂತಗಳನ್ನು ಸರಿಯಾದ ಕ್ರಮದಲ್ಲಿ ಅನುಸರಿಸುವುದು ಏಕೆ ಮುಖ್ಯ ಎಂದು ತಿಳಿಯುತ್ತದೆ. ನೀವು ಕ್ರಮವಿಧಿಗೆ ಅನುಗುಣವಾಗಿ ನೃತ್ಯ ಮಾಡುತ್ತಿರುವಾಗ, ಸಂಗೀತವೂ ಇರಲಿ! ನಿಮಗೆ ಇಷ್ಟ ಬಂದ ಹಾಡನ್ನು ಆಯ್ಕೆ ಮಾಡಬಹುದು, ಆದರೆ ನೃತ್ಯದ ಹಂತಗಳು ಅಥವಾ ದೇಹದ ಚಲನೆಗಳನ್ನು ಹೊಂದಿರುವ ಸಾಹಿತ್ಯವಿರುವ ಹಾಡನ್ನು ಆಯ್ಕೆ ಮಾಡಿದರೆ ಒಳ್ಳೆಯದು.

ಚಟುವಟಿಕೆ 3: ಬೀಜಗಳನ್ನು ಬಿತ್ತಲು ಕ್ರಮವಿಧಿ

ಉದ್ದೇಶ: ಒಂದು ಬೀಜವನ್ನು ಬಿತ್ತಿ, ಗಿಡದ ಬೆಳವಣಿಗೆಯನ್ನು ಗಮನಿಸಲು ಒಂದು ಕ್ರಮವಿಧಿಯನ್ನು ಬಳಸುವುದು

“ಬೀಜವನ್ನು ಬಿತ್ತು”ವ ಕ್ರಮವಿಧಿ

ಚರ್ಚೆ: ಪ್ರತಿಯೊಂದು ಹಂತದ ಮತ್ತು ಒಟ್ಟಾರೆ ಕ್ರಮದ ಪ್ರಾಮುಖ್ಯ

  • ಹಂತ 3ನ್ನು ಬಿಟ್ಟರೆ ಏನಾಗುವುದು?
  • ಹಂತ 8ನ್ನು ಬಿಟ್ಟರೆ ಏನಾಗುವುದು?
  • ಹಂತ 6ನ್ನು ಹಂತ 5ಕ್ಕೆ ಮೊದಲು ಕಾರ್ಯಗತ ಮಾಡಿದರೆ ಏನಾಗುವುದು?

ಚಟುವಟಿಕೆ 4: ನಿತ್ಯ ಜೀವನದಲ್ಲಿ ಕ್ರಮವಿಧಿಗಳು

ಉದ್ದೇಶ: ನಿತ್ಯ ಜೀವನದಲ್ಲಿ ಕ್ರಮವಿಧಿಗಳನ್ನು ಗುರುತಿಸುವುದು.

ಅಭ್ಯಾಸ: ನಮ್ಮ ನಿತ್ಯ ಜೀವನದ ಕೆಲವು ಕೆಲಸಗಳ ಬಗ್ಗೆ ಆಲೋಚಿಸಿ ಅವುಗಳನ್ನು ಕ್ರಮವಿಧಿಗಳಾಗಿ ವಿಭಜಿಸೋಣ.

ಉದಾಹರಣೆ 1: ಹಲ್ಲುಜ್ಜುವುದು

  1. ನಿಮ್ಮ ಬ್ರಷ್ ಅನ್ನು ತೆಗೆದುಕೊಳ್ಳಿ.
  2. ಬ್ರಷ್‌ಗೆ ಟೂತ್‌ಪೇಸ್ಟ್ ಅನ್ನು ಹಾಕಿಕೊಳ್ಳಿ.
  3. ನಲ್ಲಿಯ ಕೆಳಗಿಟ್ಟು ಟೂತ್‌ ಬ್ರಷ್ ಅನ್ನು ಒದ್ದೆ ಮಾಡಿ.
  4. ಎರಡು ನಿಮಿಷಗಳ ಕಾಲ ಹಲ್ಲುಜ್ಜಿ (ಟಿಪ್ಪಣಿ: ಇದಕ್ಕೂ ಸಹ ನೀವು ಒಂದು ಪ್ರತ್ಯೇಕ ಕ್ರಮವಿಧಿಯನ್ನು ಬರೆಯಬಹುದು).
  5. ಬಾಯಲ್ಲಿ ನೀರು ಹಾಕಿಕೊಂಡು ಮುಕ್ಕಳಿಸಿ.
  6. ಬ್ರಷ್ ಅನ್ನು ತೊಳೆದು ಅದರ ಸ್ಥಾನದಲ್ಲಿ ಇಡಿ.
ಕ್ರಮವಿಧಿ F13

ಉದಾಹರಣೆ 2: ನಿಮ್ಮ ಶಾಲೆಯ ಚೀಲವನ್ನು ಪ್ಯಾಕ್ ಮಾಡುವುದು

  1. ನಿಮ್ಮ ಎಲ್ಲ ಪುಸ್ತಕಗಳನ್ನು ಒಂದೆಡೆ ಇರಿಸಿಕೊಳ್ಳಿ.
  2. ನಿಮ್ಮ ವೇಳಾಪಟ್ಟಿಯನ್ನು ನೋಡಿ.
  3. ಅಗತ್ಯವಿರುವ ಪುಸ್ತಕಗಳನ್ನು ನಿಮ್ಮ ಚೀಲದಲ್ಲಿ ಇಡಿ.
  4. ಪೆನ್ಸಿಲ್ ಡಬ್ಬವನ್ನು ಇಡಿ.
  5. ನಿಮ್ಮ ಪೆನ್ಸಿಲ್‌ನ ಮದ್ದು ಚೂಪಾಗಿದೆಯೇ ಎಂದು ಗಮನಿಸಿ. ಒಂದು ಎರೇಜ‌ರ್ ಇಟ್ಟುಕೊಳ್ಳಿ.
  6. ನಿಮ್ಮ ಊಟದ ಡಬ್ಬಿ ಮತ್ತು ನೀರಿನ ಬಾಟಲ್‌ಗಳನ್ನು ಇಟ್ಟುಕೊಳ್ಳಿ.
  7. ನಿಮ್ಮ ಶಾಲೆಯ ಚೀಲವನ್ನು ಜಿಪ್ ಹಾಕಿ ಮುಚ್ಚಿ.

ಚರ್ಚೆ: ಈ ಕೆಲಸಗಳನ್ನು ಸರಳ ಹಂತಗಳಾಗಿ ವಿಭಜಿಸುವುದರಿಂದ, ನೀವು ಕೆಲಸಗಳನ್ನು ಹೆಚ್ಚು ದಕ್ಷವಾಗಿ ಮಾಡಬಹುದು ಮತ್ತು ನೀವು ಮಾಡಬೇಕಾದ ಎಲ್ಲ ಕೆಲಸಗಳನ್ನೂ ನೆನಪಿನಲ್ಲಿ ಇಟ್ಟುಕೊಳ್ಳಬಹುದು.

ನಿಮ್ಮ ಶಾಲೆಯ ಚೀಲವನ್ನು ಪ್ಯಾಕ್ ಮಾಡುವುದು

ಗಣಿತದ ಆಟಗಳು ಮತ್ತು ಕ್ರಮವಿಧಿ

ಆಟ 1: ವಿನ್ಯಾಸ ಗುರುತಿಸುವಿಕೆಯಿಂದ ಮೊದಲ n ಸ್ವಾಭಾವಿಕ ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುವ ಬಗೆ.

ಉದ್ದೇಶ: ಮೊದಲ ನೂರು ಸ್ವಾಭಾವಿಕ ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುವುದು.

ಕ್ರಮವಿಧಿ

  1. ಸಮಸ್ಯೆಯನ್ನು ಕಪ್ಪು ಹಲಗೆಯ ಮೇಲೆ ಬರೆಯಿರಿ: \(1+2+3+….+98+99+100\)
  2. ಈ ಶ್ರೇಣಿಯಲ್ಲಿ ಯಾವುದಾದರೂ ವಿನ್ಯಾಸಗಳನ್ನು ಗುರುತಿಸಬಹುದೇ ಎಂದು ವಿದ್ಯಾರ್ಥಿಗಳನ್ನು ಕೇಳಿ
  3. \(100+99+98…+2+1\) ಬರೆದು ಇದರ ಕೆಳಗೆ ಒಂದು ಗೆರೆಯನ್ನು ಎಳೆಯಿರಿ
  4. ಈ ಶ್ರೇಣಿಯಲ್ಲಿ ಯಾವುದಾದರೂ ವಿನ್ಯಾಸಗಳನ್ನು ಗುರುತಿಸಬಹುದೇ ಎಂದು ವಿದ್ಯಾರ್ಥಿಗಳನ್ನು ಕೇಳಿ
  5. ಸಂಖ್ಯೆಗಳು ಜೋಡಿಯಾಗುವುದನ್ನು ಕಪ್ಪು ಹಲಗೆಯ ಮೇಲೆ ಬರೆಯಿರಿ: \((1+100), (2+99), (3+98),…, (50+51)\)
  6. ಈ ವಿನ್ಯಾಸವನ್ನು ಗುರುತಿಸಿ: ಎಲ್ಲ ಜೋಡಿಗಳ ಮೊತ್ತ \(101\) ಆಗಿದೆ
  7. ಈ ರೀತಿಯ ಎಷ್ಟು ಜೋಡಿಗಳು ಇವೆ ಎಂಬುದನ್ನು ಚರ್ಚಿಸಿ.
  8. ಜೋಡಿಗಳ ಸಂಖ್ಯೆ ಮತ್ತು \(101\) ಇವುಗಳ ಗುಣಲಬ್ಧ ಕಂಡುಹಿಡಿಯಿರಿ
  9. ಈ ಗುಣಲಬ್ಧವು ಶ್ರೇಣಿಯ ಮೊತ್ತಕ್ಕೆ ಹೇಗೆ ಸಂಬಂಧಿಸಿದೆ ಎಂಬುದನ್ನು ಕಂಡುಹಿಡಿಯಿರಿ.
  10. ಇದೇ ವಿನ್ಯಾಸವನ್ನು ಬೇರೆ ಸಂಖ್ಯೆಗಳಿಗೂ ಅನ್ವಯಿಸಿ ಒಂದು ಸೂತ್ರದ ಮೂಲಕ ಸಾಮಾನ್ಯೀಕರಿಸಲು ಪ್ರಯತ್ನಿಸಿ.

ಶಿಕ್ಷಕರಿಗಾಗಿ ಟಿಪ್ಪಣಿ

ಕ್ರಮವಿಧಿಯ ಹಂತಗಳನ್ನು ವಿನ್ಯಾಸಗೊಳಿಸುವಾಗ ವಿನ್ಯಾಸಗಳನ್ನು ಗುರುತಿಸುವುದು ಹೇಗೆ ಸಹಾಯಕವಾಗುತ್ತದೆ ಎಂದು ಚರ್ಚಿಸಿ. ವಿದ್ಯಾರ್ಥಿಗಳು ಒಂದು ವಿನ್ಯಾಸವನ್ನು ಗುರುತಿಸಿದಾಗ ಅವರು ಒಂದು ಸಮಸ್ಯೆಯನ್ನು ಸರಳ ಮತ್ತು ಪುನರಾವರ್ತಿಸಬಹುದಾದಂತಹ ಭಾಗಗಳಾಗಿ ವಿಭಜಿಸುತ್ತಿದ್ದಾರೆ. ಉದಾಹರಣೆಗೆ \((5, 10, 15, 20)\) ಶ್ರೇಢಿಯನ್ನು ಗಮನಿಸಿ. ಇಲ್ಲಿ ಮೊದಲ ಸಂಖ್ಯೆಯಿಂದ ಎರಡನೇ ಸಂಖ್ಯೆಗೆ \(ಐದರಷ್ಟು\) ಹೆಚ್ಚಳ ಇರುವ ವಿನ್ಯಾಸವನ್ನು ವಿದ್ಯಾರ್ಥಿಗಳು ಗಮನಿಸಿದರೆ, ಇದು ಅವರಿಗೆ ಈ ಶ್ರೇಢಿಗೆ ಸಂಬಂಧಿಸಿದ ಲೆಕ್ಕಗಳನ್ನು ಮಾಡಲು ಸಹಾಯವಾಗುತ್ತದೆ. ಹಾಗೆಯೇ, ಒಂದು ಸಂಕೀರ್ಣ ಸಮಸ್ಯೆಯನ್ನು ಒಂದು ಸೂಚನೆಗಳ ಅಥವಾ ಹಂತಗಳ ಪಟ್ಟಿಯಾಗಿ ವಿಭಜಿಸುವುದು ಕ್ರಮವಿಧಿಯ ಉದ್ದೇಶ. ಈ ಸೂಚನೆಗಳನ್ನು ಅಥವಾ ಹಂತಗಳನ್ನು ಅನುಸರಿಸುವುದರಿಂದ ಸಮಸ್ಯೆಗೆ ಒಂದು ದಕ್ಷ ಪರಿಹಾರವನ್ನು ಪಡೆಯಲು ಸಹಾಯವಾಗುತ್ತದೆ. ಕ್ರಮವಿಧಿಗಳ ವಿಚಾರದಲ್ಲಿ, ವಿನ್ಯಾಸವನ್ನು ಗುರುತಿಸುವುದು ಬಹಳ ಮುಖ್ಯವಾದುದು; ಏಕೆಂದರೆ, ಅದು ಸಂಕೀರ್ಣ ಸಮಸ್ಯೆಗಳನ್ನು ಸರಳವಾದ ಮತ್ತು ನಿರ್ವಹಿಸಬಹುದಾದ ಭಾಗಗಳಾಗಿ ವಿಭಜಿಸಲು ಸಹಾಯ ಮಾಡುತ್ತದೆ. ದತ್ತಾಂಶವನ್ನು ಒಂದು ಕ್ರಮದಲ್ಲಿ ಜೋಡಿಸುವುದು ಮತ್ತು ಅದರಲ್ಲಿ ವಿನ್ಯಾಸಗಳನ್ನು ಗುರುತಿಸುವುದರಿಂದ ವರ್ಗೀಕರಣದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.

ಉಪಸಂಹಾರ: ಕ್ರಮವಿಧಿಗಳ ಶಕ್ತಿ

ಮೇಲುನೋಟಕ್ಕೆ ಕ್ರಮವಿಧಿಗಳು ಸಂಕೀರ್ಣವೆನಿಸಬಹುದು; ಆದರೆ, ಅವು ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಒಂದು ಆಲೋಚನಾ ರೀತಿ ಅಷ್ಟೆ. ನೀವು ಒಂದು ಖಾದ್ಯವನ್ನೇ ತಯಾರಿಸುತ್ತಿರಬಹುದು, ಒಂದು ಸಮಸ್ಯೆಯನ್ನು ಬಿಡಿಸುತ್ತಿರಬಹುದು ಅಥವಾ ಒಂದು ಆಟವನ್ನು ಆಡುತ್ತಿರಬಹುದು ಈ ಎಲ್ಲ ಸಂದರ್ಭಗಳಲ್ಲೂ, ಹೆಚ್ಚಿನ ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಕ್ರಮವಿಧಿಗಳು ಸಹಕರಿಸುತ್ತವೆ.

ಕ್ರಮವಿಧಿಗಳ ಬಗ್ಗೆ ಕಲಿಯುವುದರಿಂದ, ನಾವು ಕಂಪ್ಯೂಟರ್‌ಗಳನ್ನು ಬಳಸುವುದರಲ್ಲಿ ಅಥವಾ ಗಣಿತದ ಲೆಕ್ಕಗಳನ್ನು ಮಾಡುವುದರಲ್ಲಿ ಮಾತ್ರ ಉತ್ತಮಗೊಳ್ಳುವುದಿಲ್ಲ – ನಾವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರಲ್ಲಿ ಉತ್ತಮರಾಗುತ್ತಿದ್ದೇವೆ. ಆದ್ದರಿಂದ, ಮುಂದೆ ನೀವು ಯಾವುದಾದರೂ ಒಂದು ಕ್ಲಿಷ್ಟವಾದ ಸಮಸ್ಯೆಯನ್ನು ಪರಿಹರಿಸುವ ಸಂದರ್ಭ ಬಂದಾಗ, ಒಂದು ಕ್ರಮವಿಧಿಯ ರೀತಿಯಲ್ಲಿ ಯೋಚಿಸಲು ನೆನಪಿಡಿ: ಸಮಸ್ಯೆಯನ್ನು ಸಣ್ಣ ಹಂತಗಳಾಗಿ ವಿಭಜಿಸಿ, ಪ್ರತಿಯೊಂದು ಹಂತವನ್ನೂ ಸರಿಯಾಗಿ ಅನುಸರಿಸಿದರೆ ನೀವು ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತೀರಿ!

ಕ್ರಮವಿಧಿಗಳು ನಮ್ಮನ್ನು ಸರಿಯಾದ ಉತ್ತರದೆಡೆಗೆ ಕೊಂಡೊಯ್ಯುವ ನಿಧಿ ನಕ್ಷೆಗಳಂತೆ. ನೀವು ಹೆಚ್ಚು ಹೆಚ್ಚು ಅಭ್ಯಾಸ ಮಾಡಿದಂತೆ, ನೀವು ನಿಮ್ಮ ದಾರಿಯನ್ನು ಕಂಡುಕೊಳ್ಳುವುದರಲ್ಲಿ ಉತ್ತಮರಾಗುತ್ತೀರಿ.

ಹೆಚ್ಚು ಲೇಖನಗಳು