ಗಾಳಿಪಟ ಹಾರಿಸಿ ನೋಡಿ! ಗಣಿತ ಕಲಿಕೆಯ ಸಂತಸ

ಗಾಳಿಪಟ ಹಾರಿಸಿ ನೋಡಿ!

ಗಣಿತದ ಸಂತಸ – ಗಣಿತದ ಸಂತಸ –ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಬಳಸಲಾಗಿರುವ ಈ ನುಡಿಗಟ್ಟನ್ನು – ಇದನ್ನು ಅತ್ಯಂತ ಎಚ್ಚರದಿಂದ ನಿರ್ವಹಿಸಬೇಕು ಮತ್ತು ಇದರ ಆಳಕ್ಕೆ ಇಳಿದು ಪರಿಶೋಧಿಸಬೇಕು. ಏನಿದು ಗಣಿತದ ಸಂತಸ? ಇದರ ಅರ್ಥ ಕೇವಲ ಮೋಜು ಮಸ್ತಿಯ ತರಗತಿಗಳು ಮತ್ತು ಆಳವಿಲ್ಲದ ಗಣಿತ ಕಲಿಕೆ ಎಂದೇ? ಗಣಿತದ ತೀವ್ರ ಹುಡುಕಾಟ ನಮಗೆ ಸಂತಸ ತರಬಲ್ಲದೇ? ಅದೊಂದು ಸ್ವಯಂವೈರುಧ್ಯ ಹೇಳಿಕೆ (oxymoron) ಎಂದೆನಿಸುವುದಿಲ್ಲವೇ?

ಗಣಿತದಲ್ಲಿ ಸಂತಸದ ಪ್ರಮಾಣ ಎಷ್ಟಿರಬೇಕೆಂದು ʼಅಟ್ ರೈಟ್ ಆಂಗಲ್ಸ್ʼ ನಲ್ಲಿ ಸೂಚಿಸಲು ನಮಗೆ ಸಾಧ್ಯವಾಗಲಾರದು. ಆದರೆ ಗಣಿತವನ್ನು ಎಲ್ಲೆಡೆ ನೋಡುವ, ಆಕೃತಿಗಳು ಮತ್ತು ಸಂಖ್ಯೆಗಳಲ್ಲಿ ವಿಶಿಷ್ಟ ವಿನ್ಯಾಸಗಳನ್ನು ಕಾಣುವ, ಸಂಪರ್ಕಗಳನ್ನು ಸಾಧಿಸುವ, ಸಾಮಾನ್ಯೀಕರಣಗಳನ್ನು ಪರೀಕ್ಷಿಸುವ, ಜಾಣ ವಾದಸರಣಿಯನ್ನು ಕಟ್ಟುವ, ಅಪಾರ ಉತ್ಸಾಹವನ್ನುವಿದ್ಯಾರ್ಥಿಗಳಲ್ಲಿ ತುಂಬುವ ಮತ್ತು ಅವರ ನಿಲುವುಗಳನ್ನು ಮಾನ್ಯ ಮಾಡುವ ದಾರಿಗಳನ್ನು ನಾವು ಖಂಡಿತವಾಗಿಯೂ ಇಲ್ಲಿ ತೋರಿಸಬಹುದು. ಆತ್ಮವಿಶ್ವಾಸದಿಂದ ನಿರ್ಭೀತರಾಗಿ ನಮ್ಮ ಆಂತರ್ಯದಲ್ಲಿ ಅಡಗಿರುವ ಮಗುವಿಗೆ ಬಿಡುಗಡೆ ನೀಡೋಣ.

ಸಂಪಾದಕರ ನುಡಿ

ನಾವೀಗ ಅಟ್ ರೈಟ್ ಆಂಗಲ್ಸ್‌ನ ಹೊಸ ಆವೃತ್ತಿಯ ಎರಡನೇ ಸಂಚಿಕೆಯಲ್ಲಿದ್ದೇವೆ, ಇಲ್ಲಿ ನಾವು ಪ್ರಾಥಮಿಕ ಶಾಲಾ ಹಂತದ ಗಣಿತ ಕಲಿಕೆಗೆ ಸಂಬಂಧಿಸಿದ ಶೈಕ್ಷಣಿಕ ಸಮಸ್ಯೆಗಳನ್ನು ಚರ್ಚಿಸಲು ಪ್ರಜ್ಞಾ ಪೂರ್ವಕವಾಗಿ ಪ್ರಯತ್ನಿಸುತ್ತಿದ್ದೇವೆ. ತಮ್ಮ ಅನುಭವ ಹಾಗೂ ಕಲಿಕೆ ಎರಡನ್ನೂ ಹಂಚಿಕೊಂಡ ನಮ್ಮ ಎಲ್ಲಾ ಲೇಖಕರಿಗೆ ಮತ್ತು ತಮ್ಮ ಮುಕ್ತ ಮೆಚ್ಚುಗೆಯನ್ನು ಹಂಚಿಕೊಂಡ ಮತ್ತು ಮೌಲಿಕ ವಿಮರ್ಶೆಯನ್ನು ಮಾಡಿರುವ ನಮ್ಮ ಓದುಗರಿಗೆ ತುಂಬು ಹೃದಯದ ಧನ್ಯವಾದಗಳು.

ಜುಲೈ 2024ರ ಸಂಚಿಕೆಯ ವಿಶೇಷ ಲೇಖನಗಳ ವಿಭಾಗದಲ್ಲಿ, ನಾವು ರೀಮಾ ಕೌರ್ ಮತ್ತು ಮನಿಶಾ ಗೋಯಲ್ ಅವರೊಂದಿಗೆ ಬಹುಶಿಸ್ತೀಯ ವಿಧಾನದ ಅನ್ವೇಷಣೆಯನ್ನು ಮುಂದುವರಿಸುತ್ತೇವೆ. ಜೋಡಿಯಾಗಿ ಓದುವ ಅನುಭವ ತರಗತಿಯಲ್ಲಿ ಉತ್ತಮ ಕಲಿಕಾ ಸಾಧನವಾಗುತ್ತವೆಂದು ಅನುಭವ ಹೇಳುತ್ತದೆ. ಇಲ್ಲಿ, ಮಗುವಿನ ದೃಷ್ಟಿಕೋನದಿಂದ ದತ್ತಾಂಶವನ್ನು ನಿರ್ವಹಿಸುವ ಪರಿಕಲ್ಪನೆಯನ್ನು ಅನ್ವೇಷಿಸಲು ಅವರು ಒಂದು ಬೃಹತ್ ಪುಸ್ತಕ (The Big Book) ದ ರಚನೆಯನ್ನು ಅನ್ವೇಷಿಸುತ್ತಾರೆ. ಮತ್ತು ಅಂತಹ ಪರಿಶೋಧನೆಗಳ ಬಗ್ಗೆ ಮಾತನಾಡುವುದು ಸಂತಸದ ಸಂಗತಿಯೇ ಅಲ್ಲವೇ? ಪ್ರಾಚಿ ಎಂ ಅದೇ ವಿಭಾಗದಲ್ಲಿ ಗಣಿತೀಯ ಸಂವಾದ-ಮಾತುಕತೆ ಅಗತ್ಯವೆಂದು ಬಲವಾಗಿ ಪ್ರತಿಪಾದಿಸುತ್ತಾರೆ.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿ ಆರುಣಿ ಜೋಸೆಫ್ ಅವರು ತಮ್ಮ ಕ್ಷೇತ್ರಾನುಭವದ ಸಮಯದಲ್ಲಿ ಮಕ್ಕಳಿಗೆ ಕೋನಗಳ ಪರಿಕಲ್ಪನೆಯನ್ನು ಕಲಿಸುವಾಗಿನ ತಮ್ಮ ಅನುಭವಗಳನ್ನು ʼತರಗತಿʼ ವಿಭಾಗದಲ್ಲಿ ಹಂಚಿಕೊಂಡು ಆ ಮೂಲಕ ಇದಕ್ಕೆ ಚಾಲನೆ ನೀಡಿದ್ದಾರೆ. ಬೀಜಗಣಿತ ಮತ್ತು ರೇಖಾಗಣಿತದ ನಡುವಿನ ಪರಸ್ಪರ ಸಂಬಂಧವನ್ನು ಜೇಮ್ಸ್ ಮೆಟ್ ಮತ್ತು ಬ್ರಾಡ್ ಉಯ್‌ ಅವರು ಏಕೆ 6? ಲೇಖನದಲ್ಲಿ ಅನ್ವೇಷಿಸುತ್ತಾರೆ. ಅದು ಬೀಜಗಣಿತದ ವಿಶೇಷತೆಯನ್ನು ಅನ್ವೇಷಿಸಲು ಇಂಟರ್ಲಾಕಿಂಗ್ ಘನಗಳನ್ನು ಬಳಸಿ ಮಾಡುವ ಚಟುವಟಿಕೆಗಳಲ್ಲಿ ಕೇಳುವ ಪ್ರಶ್ನೆ. ಮ್ಯಾಥ್ ಸ್ಪೇಸ್‌ನ ಗುಣಾಕಾರ : ಒಂದು ಸುಧಾರಿತ ಕ್ರಮವಿಧಿ ಲೇಖನದಲ್ಲಿ ಮತ್ತು ಬೀಜಗಣಿತದ ಟೈಲ್ಸ್‌ನ ವಿಮರ್ಶೆಯಲ್ಲಿ ಸಹ ದೃಶ್ಯೀಕರಣವನ್ನು ಚರ್ಚಿಸಲಾಗಿದೆ.

ಕೌಶಲ್ಯವನ್ನು ಅಭ್ಯಾಸ ಮಾಡಲು ಅಗತ್ಯವಾದ ತರಗತಿಯ ಚಟುವಟಿಕೆಗಳನ್ನು ಪರಿಚಯಿಸುವ ಊಹಂದಾಜಿನ ಲೇಖನ ಗಣಿತದ ಸಂತಸ ವಿಭಾಗದಲ್ಲಿದೆ. ಇವು ಮನೆಯಲ್ಲಿ ಮತ್ತು ಆಟದ ಸಮಯದಲ್ಲಿ ವಿದ್ಯಾರ್ಥಿಗಳ ಚರ್ಚೆ- ಹರಟೆಗೆ ಹೊಸ ಮೆರುಗನ್ನು ನೀಡುತ್ತದೆಯೆಂದು ನನಗಂತೂ ಖಚಿತವಾಗಿದೆ! ನಿಮ್ಮ ವಿಶೇಷ ವರ್ಷವನ್ನು ಕಂಡುಹಿಡಿಯಿರಿ- ನಿಮ್ಮ ಜನ್ಮ ವರ್ಷದ ಕೊನೆಯ ಎರಡು ಅಂಕೆಗಳು ನಿಮ್ಮ ವಯಸ್ಸನ್ನು ಸೂಚಿಸುವ ವಿಶಿಷ್ಟ ಘಟನೆ ನಡೆಯುವುದು ಯಾವಾಗ? ನನ್ನ ವಿಶೇಷ ವರ್ಷ ಶೀಘ್ರದಲ್ಲೇ ಬರಲಿದೆ – ಆದರೆ ಅದು 2025 ರಲ್ಲಿ ಏಕೆ ಇರಲಾರದು? ಇದನ್ನು ತಿಳಿಯಲು ಮುಂದೆ ಓದಿ.

ಈ ಬಾರಿಯ ನಮ್ಮ ಮುಖಪುಟವು ಪತಂಗ ಕುಟುಂಬಗಳ ಟಿಯರ್‌ ಔಟ್‌ ಇಂದ ಪ್ರೇರಣೆ ಪಡೆದಿದೆ. ತಮ್ಮ ತರಗತಿಯ ಕೊಠಡಿಗಳಲ್ಲಿ ಈ ಸುಂದರವಾದ ಪೋಸ್ಟರನ್ನು ಹಾಕಲು ಮತ್ತು ತಮ್ಮ ವಿದ್ಯಾರ್ಥಿಗಳನ್ನು ಚತುರ್ಭುಜಗಳ ಜೊತೆ ಒಂದು ಮಾಂತ್ರಿಕ ಪ್ರಯಾಣಕ್ಕೆ ಕರೆದೊಯ್ಯಲು, ಪೋಸ್ಟರಿನಲ್ಲಿ ನೀಡಿರುವ ಹಾಗೂ ವಿದ್ಯಾರ್ಥಿಗಳಿಂದ ಬರಬಹುದಾದ ಸಂಭಾವ್ಯ ಪ್ರಶ್ನೆಗಳನ್ನು ಬಳಸಲು ಶಿಕ್ಷಕರನ್ನು ನಾವು ಉತ್ತೇಜಿಸುತ್ತೇವೆ. ಗಣಿತ ವಿಷಯದ ತೀವ್ರತೆಯ ಪರಿಧಿಯಲ್ಲಿ ಚರ್ಚೆಗಳನ್ನು ಇರಿಸಿಕೊಳ್ಳಲು ಮ್ಯಾಥ್ ಸ್ಪೇಸ್ ಕೆಲವು ಮಾರ್ಗಸೂಚಿಗಳನ್ನು ಒದಗಿಸಿದೆ. ಅಂದರೆ, ನಿಮ್ಮ ಸೀಟ್ ಬೆಲ್ಟ್ ಅನ್ನು ಬಿಗಿಗೊಳಿಸಿ ಪ್ರಯಾಣಕ್ಕೆ ನಿಮ್ಮನ್ನು ಸಜ್ಜುಗೊಳಿಸಲಾಗಿದೆ!

ಪದ್ಮಪ್ರಿಯಾ ಶಿರಾಲಿ ಅವರ ಪುಲ್‌ಔಟ್‌ಗಳು ಯಾವಾಗಲೂ ಅತಿ ಹೆಚ್ಚು ಬೇಡಿಕೆಯಲ್ಲಿವೆ. ಈ ಸಂಚಿಕೆಯಲ್ಲಿ ಅವರು ಉಷ್ಣತೆಗೆ ಸಂಬಂಧಿಸಿದ ಚಟುವಟಿಕೆಗಳ ಅನ್ವೇಷಣೆಯೊಂದಿಗೆ ನಮಗೆ ತಲೆ ಬಿಸಿ ಮಾಡುವಲ್ಲಿ ಸಫಲರಾಗಿದ್ದಾರೆ. ಇದು ಹವಾಮಾನ ಬದಲಾವಣೆ, ಸುಸ್ಥಿರತೆ ಮತ್ತು ಸಂಪನ್ಮೂಲಗಳ ಸಂರಕ್ಷಣೆಯ ಕುರಿತಾದ ಅನೇಕ ಚರ್ಚೆಗಳನ್ನು ಹುಟ್ಟುಹಾಕುತ್ತದೆ. ನಾವು ತಾಪಮಾನದ ಕ್ವಿಲ್ಟ್ ಅನ್ನು ತಯಾರಿಸುವ ಒಂದು ಆಸಕ್ತಿದಾಯಕ ಕರಕುಶಲ ಚಟುವಟಿಕೆಯೊಂದಿಗೆ ಮುಗಿಸುತ್ತೇವೆ. ಬಹುಶಿಸ್ತೀಯ ವಿಧಾನದಲ್ಲಿ ಬೋಧಿಸಲು ಬಯಸುವ ಶಿಕ್ಷಕರಿಗೆ ಇನ್ನೇನು ಬೇಕು!

ಈಗ ಅಟ್ ರೈಟ್ ಆಂಗಲ್ಸ್‌ನ ಆನ್‌ಲೈನ್‌ ಆವೃತ್ತಿಯಲ್ಲಿ ಪ್ರೌಢ ಹಂತದ ತರಗತಿಗಳಿಗೆ ಅನ್ವಯವಾಗುವಂತಹ ಲೇಖನಗಳು ಮರಳಿಬಂದಿವೆ ಎಂದು ಘೋಷಿಸಲು ನಮಗೆ ಸಂತೋಷವಾಗುತ್ತಿದೆ. ವಿಷಪೂರಿತ ಮಾದರಿಗಳ ತಾಂತ್ರಿಕ ಅನ್ವೇಷಣೆ ಲೇಖನವನ್ನು ಓದಲು ಪರಿವಿಡಿಯಲ್ಲಿ ನೀಡಲಾದ QR ಕೋಡ್ಗಳನ್ನು ಸ್ಕ್ಯಾನ್ ಮಾಡಿ. ಕುಮಾರ್ ಗಂಧರ್ವ್ ಮಿಶ್ರಾ ಅವರು ಎಕ್ಸೆಲ್ ಅನ್ನು ಬಳಸಿಕೊಂಡು ಪ್ರಾಯೋಗಿಕ ಅನ್ವೇಷಣೆಯನ್ನು ಹೇಗೆ ಪ್ರತಿಬಿಂಬಿಸಬಹುದು ಎನ್ನುವುದನ್ನು ನಿಮಗೆ ಕಲಿಸುತ್ತಾರೆ. ಎಲ್ಲಕ್ಕಿಂತ ಉತ್ತಮ ಸಂಗತಿಯೆಂದರೆ , ಈ ಅನ್ವೇಷಣಾ ಯೋಜನೆಯು ನಿಮ್ಮ ಕಂಪ್ಯೂಟೇಶನಲ್ ಆಲೋಚನಾ ಕೌಶಲ್ಯಗಳನ್ನು ಬೆಳೆಸುತ್ತದೆ.

ತಮ್ಮ ಕೆಲಸದಲ್ಲಿ ಅಟ್ ರೈಟ್ ಆಂಗಲ್ಸ್ ಪತ್ರಿಕೆಯನ್ನು ಬಳಸುವವರ ಜೊತೆ ಸದಾ ಸಂಪರ್ಕದಲ್ಲಿರಲು ನಾವೊಂದು ಪ್ರಶ್ನಾವಳಿಯನ್ನು ವಿನ್ಯಾಸಗೊಳಿಸಿದ್ದೇವೆ ಮತ್ತು ಆ ಸಮೀಕ್ಷೆಯ ಲಿಂಕ್ ಅನ್ನು ಪಡೆಯಲು AtRightAngles.editor@apu.edu.in ವಿಳಾಸಕ್ಕೆ ಮೇಲ್ ಮಾಡಲು ನಮ್ಮ ಓದುಗರಿಗೆ ವಿನಂತಿ. ನಿಮ್ಮ ಓದು ಸಂತೋಷದಾಯಕವಾಗಿರಲಿ ಮತ್ತು ನೀವು ನಮ್ಮ ಸಂಪರ್ಕದಲ್ಲಿರಿ.

ಸ್ನೇಹಾ ಟೈಟಸ್‌
ಸಂಪಾದಕರು, ಅಟ್ ರೈಟ್ ಆಂಗಲ್ಸ್‌.